ಅದ್ಯಾಯ 5
ಸುರುಳಿಯ ಏಳು ಮುದ್ರೆಗಳನ್ನು ಕುರಿತದ್ದು
1
ನಾನುಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
2
ಇದಲ್ಲದೆ ಬಲಿಷ್ಠವಾದ ಒಬ್ಬ ದೇವದೂತನು <<ಈ ಸುರುಳಿಯನ್ನು ಬಿಚ್ಚುವುದಕ್ಕೂ ಅದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?>> ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು.
3
ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ.
4
ಆಗ ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ.
5
ಹಿರಿಯರಲ್ಲಿ ಒಬ್ಬನು ನನಗೆ – <<ಅಳಬೇಡ ನೋಡು, ಯೂದಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜನೂ ಆಗಿರುವ ಒಬ್ಬನ್ನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ>> ಎಂದು ಹೇಳಿದನು.
6
ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಮಧ್ಯದಲ್ಲಿಯೂ ಮತ್ತು ಹಿರಿಯರು ಇದ್ದ ಸ್ಥಳದ ಮಧ್ಯದಲ್ಲಿ ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳು.
7
ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು.
8
ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಯಜ್ಞದ ಕುರಿಯಾದಾತನ ಪಾದಕ್ಕೆ ಅಡ್ಡ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.
9
ಅವರು ಹೊಸಹಾಡನ್ನು ಹಾಡುತ್ತಾ, <<ನೀನು ಸುರುಳಿಯನ್ನು ಸ್ವೀಕರಿಸಲು ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. ನೀನು ವಧಿಸಲ್ಪಟ್ಟು, ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ, ಭಾಷೆ, ಜನ, ಕುಲಗೋತ್ರಗಳನ್ನು ದೇವರಿಗಾಗಿ ಕೊಂಡುಕೊಂಡಿರುವೆ.
10
ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, ಯಾಜಕರನ್ನಾಗಿಯೂ ಮಾಡಿರುವೆ. ಅವರು ಭೂಮಿಯನ್ನು ಆಳುವರು,>>ಎಂಬ ಹೊಸ ಗೀತೆಯನ್ನು ಹಾಡುತ್ತಿದ್ದರು.
11
ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
12
ಅವರು <<ವಧಿಸಲ್ಪಟ್ಟ ಕುರಿಯು ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು!>> ಎಂದು ಮಹಾಧ್ವನಿಯಿಂದ ಹಾಡಿದರು.
13
ಇದಲ್ಲದೆ ಆಕಾಶದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗಡೆಯೂ ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ – <<ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಯಜ್ಞದ ಕುರಿಯಾದಾತನಿಗೂ ಸ್ತೋತ್ರ, ಗೌರವ, ಮಹಿಮೆ, ಅಧಿಪತ್ಯಗಳು ಯುಗಯುಗಾಂತರಗಳಲ್ಲಿಯೂ ಇರಲಿ.>> ಎಂದು ಹೇಳುವುದನ್ನು ಕೇಳಿದೆನು.
14
ಆಗ ನಾಲ್ಕು ಜೀವಿಗಳು <<ಆಮೆನ್>> ಅಂದವು ಮತ್ತು ಹಿರಿಯರು ಅಡ್ಡಬಿದ್ದು ನಮಸ್ಕರಿಸಿ ಆರಾಧಿಸಿದರು.