ಅದ್ಯಾಯ 4

ಪರಲೋಕದಲ್ಲಿರುವ ದೇವರ ಸಾನ್ನಿಧ್ಯವನ್ನು ಕುರಿತದ್ದು 1 ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ತುತ್ತೂರಿಯು ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, <<ಇಲ್ಲಿಗೆ ಏರಿ ಬಾ ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು.>> ಎಂದು ಹೇಳಿತು. ಕೂಡಲೆ ನಾನು ದೇವರಾತ್ಮವಶನಾದೆ. 2 ಕೂಡಲೆ ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು. 3 ಕುಳಿತಿದ್ದವನು ಕಣ್ಣಿಗೆ ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಕಾಮನಬಿಲ್ಲು ಇತ್ತು. 4 ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು 5 ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು. 6 ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. 7 ಮೊದಲನೆಯ ಜೀವಿಯು ಸಿಂಹದಂತಿತ್ತು ಎರಡನೆಯ ಜೀವಿಯು ಹೋರಿಯಂತಿತ್ತು. ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು. ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. 8 ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ, <<ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವಂಥವನು>> ಎಂದು ಹೇಳುತ್ತವೆ. 9 ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ನಾಲ್ಕು ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, 10 ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ - 11 <<ಕರ್ತನೇ ನಮ್ಮ ದೇವರೇ ನೀನು ಮಹಿಮೆಯನ್ನು ಗೌರವವನ್ನು ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ; ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.>>