ಅದ್ಯಾಯ 7
ರಕ್ಷಣೆಯನ್ನು ಹೊಂದಿದ ಯೆಹೂದ್ಯರನ್ನೂ ಅನ್ಯಜನರನ್ನೂ ಕುರಿತದ್ದು;
1
ಇದಾದ ನಂತರ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ತಡೆಹಿಡಿದಿರುವುದನ್ನು ಕಂಡೆನು.
2
ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡಿದುಕೊಂಡು ಮೂಡಣದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನುಂಟುಮಾದಲು ಅನುಮತಿ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ -
3
<<ನಾವು ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ ಸಮುದ್ರವನ್ನಾಗಲಿ ಮರಗಳನ್ನಾಗಲಿ ನಾಶಮಾಡಬೇಡಿರಿ>> ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.
4
ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ಅದನ್ನು ನಾನು ಕೇಳಿಸಿ ಕೊಂಡೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆಯೊತ್ತಿಸಿಕೊಂಡವರ. ಅವರ ಸಂಖ್ಯೆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ.
5
ಯೂದನ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು ಹನ್ನೆರಡು ಸಾವಿರ, ರೂಬೇನನ ಕುಲದವರಲ್ಲಿ ಹನ್ನೆರಡು ಸಾವಿರ, ಗಾದ್ ಕುಲದವರಲ್ಲಿ ಹನ್ನೆರಡು ಸಾವಿರ,
6
ಅಷೇರನ ಕುಲದವರಲ್ಲಿ ಹನ್ನೆರಡು ಸಾವಿರ, ನಫ್ತಾಲಿಯ ಕುಲದವರಲ್ಲಿ ಹನ್ನೆರಡು ಸಾವಿರ, ಮನಸ್ಸೆಯ ಕುಲದವರಲ್ಲಿ ಹನ್ನೆರಡು ಸಾವಿರ,
7
ಸಿಮೆಯೋನನ ಕುಲದವರಲ್ಲಿ ಹನ್ನೆರಡು ಸಾವಿರ, ಲೇವಿಯ ಕುಲದವರಲ್ಲಿ ಹನ್ನೆರಡು ಸಾವಿರ, ಇಸ್ಸಕಾರನ ಕುಲದವರಲ್ಲಿ ಹನ್ನೆರಡು ಸಾವಿರ,
8
ಜೆಬುಲೋನನ ಕುಲದವರಲ್ಲಿ ಹನ್ನೆರಡು ಸಾವಿರ, ಯೋಸೇಫನ ಕುಲದವರಲ್ಲಿ ಹನ್ನೆರಡು ಸಾವಿರ, ಬೆನ್ಯಾಮೀನನ ಕುಲದವರಲ್ಲಿ ಮುದ್ರೆ ಹಾಕಿಸಿಕೊಂಡವರು ಹನ್ನೆರಡು ಸಾವಿರ ಮಂದಿ ಇದ್ದರು.
9
ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.
10
ಅವರು - <<ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ ಸೇರಿದ್ದು>> ಎಂದು ಮಹಾ ಧ್ವನಿಯಿಂದ ಕೂಗಿದರು.
11
ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನದ ಸುತ್ತಲು ನಿಂತಿದ್ದರು. ಹಿರಿಯರು ಮತ್ತು ನಾಲ್ಕು ಜೀವಿಗಳು ಇವುಗಳ ಸುತ್ತಲೂ ನಿಂತುಕೊಂಡಿದ್ದರು ಅವರು ಸಿಂಹಾಸನದ ಮುಂದೆ ಅಡ್ಡ ಬಿದ್ದು -
12
<<ಆಮೆನ್! ಸ್ತೋತ್ರವೂ, ಮಹಿಮೆಯು, ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ ಶಕ್ತಿಯೂ ಪರಾಕ್ರಮವೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್!>> ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.
13
ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು – <<ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು>> ಎಂದು ನನ್ನನ್ನು ಕೇಳಲು – <<ಅಯ್ಯಾ ನೀನೇ ಬಲ್ಲೆ>> ಎಂದೆನು
14
ಅವನು ನನಗೆ - <<ಇವರು ಆ ಮಹಾಸಂಕಟದಿಂದ ಹೊರಬಂದವರು; ಯಜ್ಞದ ಕುರಿಮರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿಕೊಂಡಿದ್ದಾರೆ.
15
ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ; ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ಬಿಡಾರವಾಗಿರುವನು.
16
ಇನ್ನೆಂದಿಗೂ ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ;
17
ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.>> ಎಂದು ಹೇಳಿದರು.