ಸೈತಾನನು ನಾಶವಾದದ್ದು;
1
ಒಬ್ಬ ದೇವದೂತನು ಪಾತಾಳದ ಬೀಗದ ಕೈಯನ್ನೂ ಮತ್ತು ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು.
2
ಪಿಶಾಚಿಯೂ ಸೈತಾನನೂ ಆಗಿರುವ ಪುರಾತನ ಸರ್ಪವೆಂಬ ಘಟಸರ್ಪವನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
3
ಸಾವಿರ ವರ್ಷ ಮುಗಿಯುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು ಪಾತಾಳಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು.
4
ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು. ಅವರು ಪುನಃ ಜೀವಿತರಾಗಿ ಎದ್ದು ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು.
5
ಉಳಿದವರು ಆ ಸಾವಿರ ವರ್ಷಗಳ ಮುಗಿಯುವವರೆಗೂ ಜೀವಿತರಾಗಿ ಏಳಲಿಲ್ಲ. ಇದೇ ಮೊದಲನೇಯ ಪುನರುತ್ಥಾನವು.
6
ಪುನರುತ್ಥಾನದಲ್ಲಿ ಸೇರಿದ್ದವರು ಧನ್ಯರೂ ಮತ್ತು ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.
7
ಸಾವಿರ ವರ್ಷಗಳು ಮುಗಿದ ಮೇಲೆ ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವುದು.
8
ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ - ಗೋಗ್ ಮತ್ತು ಮಾಗೋಗ್ - ಎಂಬ ಜನಾಂಗಗಳನ್ನು ಮರುಳುಗೊಳಿಸಿ ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.
9
ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.
10
ಇದಲ್ಲದೆ ಅವರನ್ನು ಮೋಸಗೊಳಿಸಿದ ಸೈತಾನನು ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು. ಸತ್ತವರ ಪುನರುತ್ಥಾನವನ್ನೂ ಕಡೇ ನ್ಯಾಯತೀರ್ಪನ್ನೂ ಕುರಿತದ್ದು. ಮೃತ್ಯುವೂ ಪಾತಾಳವೂ ನಾಶವಾದದ್ದು;
11
ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತಿದ್ದಾತನನ್ನೂ ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು, ಆದರೆ ಹೋಗುವುದಕ್ಕೆ ಅವುಗಳಿಗೆ ಸ್ಥಳವಿರಲಿಲ್ಲ. ಅವುಗಳು ಮತ್ತೆ ಕಾಣಿಸಲೇ ಇಲ್ಲ.
12
ಸತ್ತವರಾದ - ಶ್ರೇಷ್ಠರಿಂದ ಕನಿಷ್ಠರವರೆಗೂ ಸಿಂಹಾಸನದ ಮುಂದೆ ನಿಂತಿರುವುದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು. ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು. ಆ ಪುಸ್ತಕಗಳಲ್ಲಿ ಬರೆದಿರುವ ಪ್ರಕಾರ, ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.
13
ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.
14
ಆ ಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.
15
ಯಾರ ಹೆಸರು ಜೀವಬಾಧ್ಯರ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.