ಅದ್ಯಾಯ 14
ರಕ್ಷಣೆ ಹೊಂದಿದವರ ಉತ್ಸವಗೀತೆ, ನಾಲ್ಕು ಪ್ರಕಟನೆಗಳು, ಭೂಲೋಕದ ಸುಗ್ಗಿಕಾಲ, ಇವುಗಳನ್ನು ಕುರಿತದ್ದು;
1
ನಾನು ನೋಡಲಾಗಿ ಯಜ್ಞದ ಕುರಿಮರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಕಂಡೆನು. ಆತನ ಜೊತೆಯಲ್ಲಿ ಒಂದುಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.
2
ಪರಲೋಕದಿಂದ ಜಲಪ್ರವಾಹದ ಘೋಷದಂತೆಯೂ ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಮಹಾಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ವೀಣೆಗಳನ್ನು ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು.
3
ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಬೆಲೆಯನ್ನುತೆತ್ತು ಕೊಂಡುಕೊಂಡಿದ್ದ ಆ ಒಂದುಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು
4
ಕನ್ಯೆಯರಂತೆ ಕಳಂಕರಹಿತರು, ಸ್ತ್ರೀಗಳೊಂದಿಗೆ ಮಲಿನರಾಗದವರಾಗಿದ್ದಾರು. ಯಜ್ಞದ ಕುರಿಮರಿಯಾದಾತನಿಗೂ ಪ್ರಥಮಫಲದಂತಾದವರಾಗಿದ್ದಾರೆ.
5
ಬಾಯಲ್ಲಿ ಸುಳ್ಳು ಇರಲೇಇಲ್ಲ. ಇವರು ನಿರ್ದೋಷಿಗಳಾಗಿದ್ದು ನಿಷ್ಕಳಂಕರಾಗಿದ್ದಾರೆ. 2:ನಾಲ್ಕು ಪ್ರಕಟನೆಗಳು;
6
ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜಾತಿ, ಜನ, ಜನಾಂಗ, ಕುಲ, ಭಾಷೆಗಳವರೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯನಿರಂತರದ ಶುಭವರ್ತಮಾನವಾದ ಸುವಾರ್ತೆಯು ಆತನೊಂದಿಗಿತ್ತು.
7
ದೂತನು, <<ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ,>> ಎಂದು ಮಹಾ ಧ್ವನಿಯಿಂದ ಹೇಳಿದನು.
8
ಹಿಂದೆ ಎರಡನೆಯ ದೇವದೂತನು ಅವನನ್ನು ಹಿಂಬಾಲಿಸುತ್ತಾ ಬಂದು, <<ಬಿದ್ದಳು! ಬಿದ್ದಳು! ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದ್ದಳು>> ಎಂದು ಹೇಳಿದನು.
9
ಹಿಂದೆ ಮೂರನೆಯ ದೇವದೂತನು ಬಂದು ಅವನನ್ನು ಹಿಂಬಾಲಿಸುತ್ತಾ <<ಯಾವನಾದರೂ ಯಾವುದೇ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ ಅವನೂ ಸಹ
10
ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.
11
ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ ಹಗಲೂ ರಾತ್ರಿ ಉಪಶಮನವಿಲ್ಲದೆ ಯಾತನೆಪಡುವರು>> ಎಂದು ಮಹಾ ಶಬ್ದದಿಂದ ಹೇಳಿದನು.
12
ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ಇಲ್ಲಿ ಅಗತ್ಯವಾಗಿರಬೇಕಾಗಿದೆ.
13
ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು – <<ಇಂದಿನಿಂದ ಕರ್ತನ ಭಕ್ತರಾಗಿ ಸಾಯುವವರು ಧನ್ಯರು ಎಂಬುದಾಗಿ ಬರೆ>> ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು – <<ಹೌದು, ಅವರು ಧನ್ಯರೇ; ಅವರ ಕಷ್ಟ ತೀರಿತು, ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳಬೇಕಾಗಿದೆ. ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ>> ಎಂದು ಆತ್ಮನು ಹೇಳುತ್ತಾನೆ. 3:ಭೂಲೋಕದ ಸುಗ್ಗಿಕಾಲವನ್ನು ಕುರಿತದ್ದು
14
ನಾನು ನೋಡಲಾಗಿ ಇಗೋ, ಒಂದು ಬಿಳಿ ಮೇಘವು ಕಾಣಿಸಿತು. ಆ ಮೇಘದ ಮೇಲೆ ಮನುಷ್ಯಕುಮಾರನಂತಿದ್ದ ಒಬ್ಬಾತನು ಕುಳಿತಿರುವುದನ್ನು ಕಂಡೆನು. ಆತನ ತಲೆಯ ಮೇಲೆ ಚಿನ್ನದ ಕಿರೀಟವೂ, ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
15
ಮತ್ತೊಬ್ಬ ದೂತನು ದೇವಾಲಯದೊಳಗಿನಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ – <<ಭೂಮಿಯ ಪೈರು ಮಾಗಿದೆ. ಕೊಯ್ಯುವ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ಹಾಕಿ ಪೈರನ್ನು ಕೊಯ್ಯಿ,>> ಎಂದು ಮಹಾ ಧ್ವನಿಯಿಂದ ಕೂಗಿದನು.
16
ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
17
ದೇವದೂತನು ಪರಲೋಕದಲ್ಲಿರುವ ದೇವಾಲಯದೊಳಗಿನಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು.
18
ಬೆಂಕಿಗೆ ಅಧಿಕಾರಿಯಾದ ಇನ್ನೊಬ್ಬ ದೂತನು ಯಜ್ಞಪೀಠದ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ – <<ನಿನ್ನ ಹರಿತವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷೆಗೊಂಚಲುಗಳನ್ನು ಕೊಯ್ಯಿ. ಅದರ ಹಣ್ಣುಗಳು ಪೂರಾ ಮಾಗಿವೆ>> ಎಂದು ಮಹಾ ಧ್ವನಿಯಿಂದ ಕೂಗಿದನು.
19
ಆ ದೂತನು ತನ್ನ ಕುಡುಗೋಲಿನಿಂದ ಭೂಮಿಯ ಮೇಲಿನ ದ್ರಾಕ್ಷಿಬಳ್ಳಿಯಲ್ಲಿದ್ದ ದ್ರಾಕ್ಷಿಹಣ್ಣನ್ನು ಕೊಯ್ದು ಕೂಡಿಸಿ, ದೇವರ ರೌದ್ರವೆಂಬ ದೊಡ್ಡ ದ್ರಾಕ್ಷಿಯ ತೊಟ್ಟಿಯಲ್ಲಿ ಹಾಕಿದನು.
20
ಅದನ್ನು ಪಟ್ಟಣದ ಹೊರಗೆ ತೆಗೆದುಕೊಂಡು ಹೋಗಿ ತುಳಿದರು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಮೇಲಕ್ಕೆ ಬಂದು ಇನ್ನೂರು ಮೈಲಿಗಳಷ್ಟು ದೂರ ಹರಿಯಿತು.