ಅದ್ಯಾಯ 21

ದೇವರಿಗೆ ಕಾಣಿಕೆ ಕೊಡುವವರೊಳಗಿನ ತಾರತಮ್ಯವನ್ನು ಕುರಿತು ಮಾತನಾಡಿದ್ದು 1 ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವುದನ್ನು ಕಂಡನು. 2 ಆಗ ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು ಹಾಕುವುದನ್ನು ಯೇಸುವು ಗಮನಿಸಿ - 3 <<ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. 4 ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆ ಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕಿದ್ದುದ್ದೆಲ್ಲವನ್ನೂ ಕೊಟ್ಟುಬಿಟ್ಟಳು>> ಅಂದನು. ಯೇಸು ಯೆರೂಸಲೇಮಿನ ನಾಶವನ್ನೂ ಯುಗದ ಸಮಾಪ್ತಿಯನ್ನೂ ಕುರಿತು ಮುಂತಿಳಿಸಿದ್ದು 5 ಕೆಲವರು ದೇವಾಲಯದ ವಿಷಯದಲ್ಲಿ ಅದು ಅಂದವಾದ ಕಲ್ಲುಗಳಿಂದಲೂ ಕಾಣಿಕೆಯ ವಸ್ತುಗಳಿಂದಲೂ ಅಲಂಕಾರವಾಗಿದೆ ಎಂದು ಹೇಳುತ್ತಿರುವಾಗ 6 ಯೇಸುವು - <<ನೀವು ಇವುಗಳನ್ನು ನೋಡುತ್ತಿದ್ದೀರಲ್ಲಾ, ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿನಗಳು ಬರುವವು>> ಅಂದನು. 7 ಅವರು - <<ಬೋಧಕನೇ, ಅದು ಯಾವಾಗ ಆಗುವುದು? ಅದು ಸಂಭವಿಸುವಾಗ ಯಾವ ಸೂಚನೆಗಳುಂಟಾಗುವುವು?>> ಎಂದು ಆತನನ್ನು ಕೇಳಲು 8 ಯೇಸುವು ಹೇಳಿದ್ದೇನಂದರೆ - <<ನೀವು ಮೋಸಹೋಗದಂತೆ ಎಚ್ಚರವಾಗಿರಿ. ಯಾಕೆಂದರೆ ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು <ನಾನೇ ಕ್ರಿಸ್ತನು, ನಾನೇ ಕ್ರಿಸ್ತನು> ಎಂತಲೂ <ಆ ಕಾಲ ಹತ್ತಿರವಾಯಿತು> ಎಂತಲೂ ಹೇಳುವರು; ಅವರ ಹಿಂದೆ ಹೋಗಬೇಡಿರಿ. 9 ಇದಲ್ಲದೆ ಯುದ್ಧಗಳೂ ಗಲಭೆಗಳೂ ಆಗುವುದನ್ನು ನೀವು ಕೇಳುವಾಗ, ನೋಡುವಾಗ ಭಯಭೀತರಾಗಬೇಡಿರಿ; ಯಾಕೆಂದರೆ ಇದೆಲ್ಲಾ ಮೊದಲು ಆಗುವುದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವುದಿಲ್ಲ>> ಅಂದನು. 10 ಮತ್ತು ಯೇಸು ಅವರಿಗೆ ಹೇಳಿದ್ದೇನಂದರೆ - <<ಜನಕ್ಕೆ ವಿರೋಧವಾಗಿ ಜನರೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; 11 ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು; ಭಯಾನಕ ಘಟನೆಗಳೂ ಮಹಾ ಸೂಚನೆಗಳೂ ಆಕಾಶದಲ್ಲಿ ತೋರುವವು. 12 ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು. 13 ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು. 14 ಆದ್ದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನಾವು ಮುಂದಾಗಿ ಯೋಚಿಸುವುದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. 15 ಯಾಕೆಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರು ನಿಲ್ಲುವುದಕ್ಕೂ ಎದುರು ಮಾತನಾಡುವುದಕ್ಕೂ ಆಗದಂಥ ಬಾಯನ್ನೂ, ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ. 16 ಆದರೆ ತಂದೆತಾಯಿಗಳೂ ಅಣ್ಣತಮ್ಮಂದಿರೂ ಬಂಧುಬಾಂಧವರೂ ಸ್ನೇಹಿತರೂ ನಿಮ್ಮನ್ನು ಅವರಿಗೆ ಒಪ್ಪಿಸಿಕೊಡುವರು; ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. 17 ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. 18 ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವುದಿಲ್ಲ. 19 ನೀವು ಸಹನೆಯಿಂದ ನಿಮ್ಮ ಪ್ರಾಣಗಳನ್ನು ಪಡೆದುಕೊಳ್ಳುವಿರೀ 20 ಆದರೆ ಸೈನಿಕರ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವುದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳಿದುಕೊಳ್ಳಿರಿ. 21 ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ. 22 ಯಾಕೆಂದರೆ ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಅವು ದಂಡನೆಯ ದಿನಗಳಾಗಿವೆ. 23 ಆ ದಿನಗಳಲ್ಲಿ ಗರ್ಭಿಣಿಯರಿಗೂ ಮೊಲೆಕುಡಿಸುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರಿಗೆ ಉಗ್ರದಂಡನೆಯೂ ಆಗುವವು. 24 ಅವರು ಕತ್ತಿಯ ಬಾಯಿಗೆ ಗುರಿಯಾಗುವರು; ಅವರನ್ನು ಅನ್ಯದೇಶಗಳಿಗೆಲ್ಲಾ ಸೆರೆಹಿಡಿದುಕೊಂಡು ಹೋಗುವರು; ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು. 25 ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂಮಿಯ ಮೇಲೆ ಸಮುದ್ರದ ಮತ್ತು ಅಲೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕುಕಾಣದೆ ಸಂಕಟವು ಉಂಟಾಗುವುದು. 26 ಆಕಾಶದ ಶಕ್ತಿಗಳು ಕದಲುವುದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವುದೋ ಎಂದು ಎದುರು ನೋಡುತ್ತಾ ಪ್ರಾಣಹೋದಂತಾಗುವರು. 27 ಆಗ ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಕಾಣುವರು. 28 ಆದರೆ ಇವು ಸಂಭವಿಸುವುದಕ್ಕೆ ತೊಡಗುವಾಗ, ನಿಮ್ಮ ತಲೆಗಳನ್ನು ಮೇಲಕ್ಕೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ>> ಅಂದನು. 29 ಯೇಸುವು ಅವರಿಗೆ ಒಂದು ಸಾಮ್ಯವಾಗಿ ಹೇಳಿದ್ದೇನಂದರೆ - <<ಅಂಜೂರ ಮುಂತಾದ ಮರಗಳನ್ನೂ ನೋಡಿರಿ. 30 ಅವು ಚಿಗುರಿದ ಕೂಡಲೆ ನೀವು ಅವನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳಿದುಕೊಳ್ಳುತ್ತೀರಲ್ಲಾ. 31 ಹಾಗೆಯೇ ಇವುಗಳಾಗುವುದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳಿರಿ. 32 ಇವೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 33 ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ. 34 <<ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. ಅತಿ ಭೋಜನದ ಮದದಿಂದಲೂ ಅಮಲಿನಿಂದಲೂ ಪ್ರಾಪಂಚಿಕವಾದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರುಲಿನಂತೆ ಫಕ್ಕನೆ ಬಂದೀತು. 35 ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವುದು. 36 ಆದರೆ ಅಂದು ಬರುವುದಕ್ಕಿರುವ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳುವುದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವುದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರಿ>> ಅಂದನು. ಅಧಿಕಾರಿಗಳು ಯೇಸುವನ್ನು ಕೊಲ್ಲುವುದಕ್ಕೆ ಉಪಾಯಮಾಡಿದ್ದು 37 ಯೇಸು ಹಗಲಿನಲ್ಲಿ ದೇವಾಲಯದಲ್ಲಿ ಉಪದೇಶಮಾಡುತ್ತಾ ರಾತ್ರಿ ಪಟ್ಟಣದ ಹೊರಗೆ ಹೋಗಿ ಎಣ್ಣೆ ಮರಗಳ ತೋಪು ಎನಿಸಿಕೊಳ್ಳುವ ಗುಡ್ಡದಲ್ಲಿ ಉಳಿದುಕೊಳ್ಳುತ್ತಾ ಇದ್ದನು. 38 ಜನರೆಲ್ಲರು ಆತನ ಉಪದೇಶವನ್ನು ಕೇಳಬೇಕೆಂದು ಬೆಳಗ್ಗೆ ಬೇಗನೆ ಎದ್ದು ದೇವಾಲಯಕ್ಕೆ ಆತನ ಬಳಿಗೆ ಬರುತ್ತಿದ್ದರು.