ಅದ್ಯಾಯ 17

ಮತ್ತೊಬ್ಬರಿಗೆ ವಿಘ್ನವಾಗದೆ ಅವರ ತಪ್ಪುಗಳನ್ನು ಕ್ಷಮಿಸಬೇಕೆಂಬುವ ಬೋಧೆ 1 ಯೇಸು ತನ್ನ ಶಿಷ್ಯರಿಗೆ - <<ಅಡ್ಡಿ ಆತಂಕಗಳು ಬಾರದೆ ಇರಲಾರವು; ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ? 2 ಅವನು ಈ ಚಿಕ್ಕವರಲ್ಲಿ ಒಬ್ಬನಿಗೆ ತೊಂದರೆಗಳನ್ನು ಓಡ್ಡುವುದಕ್ಕಿಂತ ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದೇ ಲೇಸು. 3 ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು; ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು. 4 ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು>> ಎಂದು ಹೇಳಿದನು. ನಂಬಿಕೆಯ ಮಹತ್ವದ ವರ್ಣನೆ. 5 ಅಪೊಸ್ತಲರು ಕರ್ತನಿಗೆ - <<ನಮ್ಮ ನಂಬಿಕೆಯನ್ನು ಹೆಚ್ಚಿಸು>> ಎಂದು ಹೇಳಲು 6 ಕರ್ತನು - <<ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅಂಜೂರದಮರಕ್ಕೆ- <ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ> ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು>> ಅಂದನು. ಮಾಡಬೇಕಾದದ್ದನ್ನು ಮಾಡುವುದು ನಮ್ಮ ಕರ್ತವ್ಯವೇ ಹೊರತು ಪುಣ್ಯಕಾರ್ಯವಲ್ಲವೆಂಬ ಬೋಧೆ 7 <<ನಿಮ್ಮಲ್ಲಿ ಯಾವನಿಗಾದರೂ ವ್ಯವಸಾಯ ಮಾಡುವ ಅಥವಾ ಕುರಿಮೇಯಿಸುವ ಆಳಿರಲಾಗಿ ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ - <ನೀನು ತಟ್ಟನೆ ಬಂದು ಊಟಕ್ಕೆ ಕುಳಿತುಕೋ> ಎಂದು ಹೇಳುವನೇ? 8 ಹಾಗೆ ಹೇಳದೆ - <ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು, ನಾನು ಊಟಮಾಡುವ ತನಕ ನಡುಕಟ್ಟಿಕೊಂಡು ನನಗೆ ಸೇವೆಮಾಡು; ಆ ಮೇಲೆ ನೀನು ಊಟಮಾಡು, ಕುಡಿ> ಎಂದು ಹೇಳುವನಲ್ಲವೇ. 9 ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ - ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ. 10 1ನೀವು ನಿಮಗೆ ಅಪ್ಪಣೆಯಾಗಿರುವದನ್ನೆಲ್ಲಾ ಮಾಡಿದ ಮೇಲೆ ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ ಅನ್ನಿರಿ>> ಎಂದು ಹೇಳಿದನು. ಯೇಸು ಹತ್ತುಮಂದಿ ಕುಷ್ಠರೋಗಿಗಳನ್ನು ಸ್ವಸ್ಥಮಾಡಿದಾಗ ಒಬ್ಬನು ಮಾತ್ರ ಬಂದು ಕೃತಜ್ಞತೆಯನ್ನು ಸೂಚಿಸಿದ್ದು 11 ಯೇಸು ಯೆರೂಸಲೇಮಿಗೆ ಪ್ರಯಾಣಮಾಡುವಾಗ ಸಮಾರ್ಯ, ಗಲಿಲಾಯ ಸೀಮೆಗಳ ನಡುವೆ ಹಾದುಹೋದನು. 12 ಒಂದು ಹಳ್ಳಿಗೆ ಬಂದಾಗ ಹತ್ತುಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು, 13 <ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು>> ಎಂದು ಕೂಗಿಹೇಳಿದರು. 14 ಆತನು ಅವರನ್ನು ನೋಡಿ - <<ನೀವು ಹೋಗಿ ಯಾಜಕರಿಗೆ ನಿಮ್ಮ ಮೈ ತೋರಿಸಿಕೊಳ್ಳಿರಿ>> ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು. 15 ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು ಯೇಸುವಿನ ಪಾದಗಳಿಗೆ ಅಡ್ಡಬಿದ್ದು 16 ಆತನಿಗೆ ಕೃತಜ್ಞತಾಸುತ್ತಿಯನ್ನು ಸಲ್ಲಿಸಿದನು. ಅವನು ಸಮಾರ್ಯದವನು. 17 ಯೇಸು ಇದನ್ನು ನೋಡಿ - <<ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ? 18 ದೇವರನ್ನು ಸ್ತುತಿಸುವುದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ?>> ಎಂದು ಹೇಳಿ - 19 ಅವನಿಗೆ, <<ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ>> ಎಂದು ಹೇಳಿದನು. ದೇವರ ರಾಜ್ಯವು ಯಾವಾಗ ಮತ್ತು ಎಲ್ಲಿ ಬರುವುದು ಎಂಬ ವಿಷಯವಾಗಿ ಯೇಸು ಉಪದೇಶಮಾಡಿದ್ದು 20 ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ - <<ದೇವರ ರಾಜ್ಯವು ಸೂಚನೆಗಳನ್ನು ಗಮನಿಸುತ್ತಾ ಕಾಯುತ್ತಿರುವಾಗ ಪ್ರತ್ಯಕ್ಷವಾಗಿ ಬರುವಂಥದಲ್ಲ. 21 ಇಲ್ಲಿ ಇದೆ, ಅಗೋ ಅಲ್ಲಿ ಅದೆ> ಎಂದು ಹೇಳುವುದಕ್ಕಾಗದು; ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಎಂದು ತಿಳಿದುಕೊಳ್ಳಿರಿ>> ಎಂದು ಹೇಳಿದನು. 22 ಮತ್ತು ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - <<ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ಮನುಷ್ಯಕುಮಾರನ ದಿವಸಗಳೊಳಗೆ ಒಂದು ದಿನವನ್ನು ನೋಡಬೇಕೆಂದು ಅಪೇಕ್ಷಿಸಿದರೂ ಅದನ್ನು ನೋಡದೆ ಇರುವಿರಿ. 23 ಜನರು ನಿಮಗೆ - <ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ> ಎಂದು ಹೇಳಿದರೆ ನೀವು ಅವರು ಹೇಳುವಲ್ಲಿಗೆ ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ. 24 ಯಾಕೆಂದರೆ ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹೇಗೆ ಹೊಳೆಯುವುದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿರುವನು. 25 ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಜನರಿಂದ ತಿರಸ್ಕರಿಸಲ್ಪಡಬೇಕು. 26 ನೋಹನ ದಿವಸಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿವಸಗಳಲ್ಲಿಯೂ ನಡೆಯುವುದು. 27 ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಳಯವು ಬಂದು ಎಲ್ಲರನ್ನು ನಾಶಮಾಡಿತು. 28 ಮತ್ತು ಲೋಟನ ದಿವಸಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. 29 ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. 30 ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವುದು. 31 ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಇಳಿದು ಬರಬಾರದು; ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರುಗಿ ಹಿಂದಕ್ಕೆ ಹೋಗಬಾರದು. 32 ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ. 33 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು; ಪ್ರಾಣವನ್ನು ಕಳೆದುಕೊಂಡವನು ಅದನ್ನು ರಕ್ಷಿಸಿಕೊಳ್ಳುವನು. 34 ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಕೈ ಬಿಡಲ್ಪಡುವನು. 35 ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು>> ಅಂದನು. 36 37 ಈ ಮಾತಿಗೆ ಶಿಷ್ಯರು - <<ಕರ್ತನೇ, ಅದು ಎಲ್ಲಿ ಆಗುವುದು?>> ಎಂದು ಕೇಳಲು ಆತನು ಅವರಿಗೆ - <<ಹೆಣ ಎಲ್ಲಿಯೋ ಅಲ್ಲಿಯೇ ಹದ್ದುಗಳು ಬಂದು ಸೇರುವವು>> ಎಂದು ಉತ್ತರಕೊಟ್ಟನು.